 ಮುರುಗೋಡು
	ಬೆಳಗಾಂವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನಲ್ಲಿರುವ ಐತಿಹಾಸಿಕ ಸ್ಥಳ. ಇಲ್ಲಿ ವೀರಶೈವರ ಪ್ರಖ್ಯಾತವಾದ ದುರುಡುಂಡೇಶ್ವರ ಮಠವಿದೆ. ಈ ಊರಿನ ಬೆಟ್ಟದ ಕಣಿವೆಯಲ್ಲಿ ಅನೇಕ ಗವಿಗಳಿವೆ. ಕಲ್ಯಾಣದ ಕ್ರಾಂತಿಯಾದ ಮೇಲೆ ಉಳುವಿಯ ಮಹಾಮನೆಗೆ ಹೋಗುವ ದಾರಿಯಲ್ಲಿ ಚನ್ನಬಸವಣ್ಣ, ಅಕ್ಕ ನಾಗಮ್ಮ, ರುದ್ರಮುನಿಸ್ವಾಮಿ, ಮಡಿವಾಳ ಮಾಚಯ್ಯ ಮೊದಲಾದ ಶಿವಶರಣರು ಈ ಬೆಟ್ಟದ ಗವಿಗಳಲ್ಲಿ ಆತ್ಮ ಸಂರಕ್ಷಣೆಗಾಗಿ ಇದ್ದರೆಂಬ ಪ್ರತೀತಿ ಇದೆ. ಬಿಜ್ಜಳನ ಸೈನ್ಯ ಇಲ್ಲಿಗೂ ಬೆನ್ನಟ್ಟಿ ಬಂದಾಗ ಶರಣರು ಶಸ್ತ್ರಸಜ್ಜಿತರಾಗಿ ಶತ್ರುಗಳನ್ನು ಸದೆ ಬಡಿದರು ಎಂದು ಹೇಳುತ್ತಾರೆ. ಆದ್ದರಿಂದ ಈ ಊರಿಗೆ ಮುರಿದೋಡು ಅಥವಾ ಮುರುಗೋಡು ಎಂಬ ಹೆಸರು ಬಂದಿತೆಂದು ತಿಳಿದುಬರುತ್ತದೆ.
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ